ಬೀನೆ, ಆಲ್ಫ್ರೆಡ್
1857-1911. ಫ್ರೆಂಚ್ ಮನೋವಿಜ್ಞಾನಿ. ವಿವೇಚನೆ, ಬುದ್ಧಶಕ್ತಿಗಳನ್ನು ಕುರಿತು ಸಂಶೋಧನೆ ನಡೆಸಿ ಖ್ಯಾತಿ ಗಳಿಸಿದವ. ಹುಟ್ಟಿದ್ದು ಫ್ರಾನ್ಸಿನ ನೀಸ್ ನಗರದಲ್ಲಿ. ಪ್ಯಾರಿಸ್ಸಿನಲ್ಲಿ ನ್ಯಾಯ ಶಾಸ್ತ್ರ, ವೈದ್ಯವಿಜ್ಞಾನ ಮತ್ತು ಜೀವ ವಿಜ್ಞಾನಗಳಲ್ಲಿ ವ್ಯಾಸಂಗ ನಡೆಸಿ ಅನಂತರ ನೂತನ ಮನೋ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕನಾದ. ಆಗ ಫ್ರಾನ್ಸಿನಲ್ಲಿ ಇಂಗ್ಲಿಷ್ ಮನೋ ವಿಜ್ಞಾನ ಪಂಥದವರ ಪ್ರಭಾವ ಹೆಚ್ಚಾಗಿತ್ತು. ಈತ ಕೇವಲ ಭಾವನಾತ್ಮಕ ಸ್ವರೂಪದಲ್ಲಿದ್ದ ಮನೋವಿಜ್ಞಾನವನ್ನು ಶುದ್ಧ ಪ್ರಯೋಗಾವಲಂಬಿಯಾಗುವಂತೆ ಮಾಡಲು ಉದ್ದೇಶಿಸಿದ. ಉನ್ನತ ಮನಶ್ಯಕ್ತಿಗಳ ಆಧ್ಯಯನ ಹೇಗೆ ನಿತ್ಯ ಜೀವನದಲ್ಲಿ ಭಾಗವಹಿಸುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ಅರಿಯಲು ಯತ್ನಿಸಿದ. ವಶೀಕರಣ, ಮಾನಸಿಕ ಆಯಾಸ, ವ್ಯಕ್ತಿತ್ವಕ್ಕೆ ಸಂಬಂಧಿಸಿದಂತೆ ಮಾನಸಿಕ ರೋಗದ ದ್ವಂದ್ವ ಮುಖ ಮುಂತಾದವನ್ನು ಕುರಿತಂತೆಯೂ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ. ಅನಂತರ ಪ್ಯಾರಿಸ್ಸಿನಲ್ಲಿ ಮಕ್ಕಳ ಪರಿಶೀಲನೆಗಾಗಿ ಪ್ರಯೋಗ ಶಾಲೆ ತೆರೆದ. ವೈಯಕ್ತಿಕ ಮನೋವಿಜ್ಞಾನ ಪಂಥವನ್ನು ಬಲಪಡಿಸಲು ಫ್ರಾನ್ಸಿಸ್ ಗ್ಯಾಲ್ಟನ್ ನಡೆಸುತ್ತಿದ್ದ ಪ್ರಯೋಗಗಳಲ್ಲಿ ಈತನಿಗೆ ಆಸಕ್ತಿ ಉಂಟಾಯಿತು. ಅನಂತರ ಬುದ್ಧಿ ಶಕ್ತಿಯ ಪ್ರಯೋಗಗಳನ್ನು ತನ್ನ ಇಬ್ಬರು ಹೆಣ್ಣುಮಕ್ಕಳ ಮೇಲೆ ನಡೆಸಿದ. ಈ ಪ್ರಯೋಗಗಳಲ್ಲಿ ಮಸಿ ಒತ್ತು, ಚಿತ್ರ ಮುಂತಾದವನ್ನು ಬಳಸಿಕೊಂಡು ಫ್ರಾನ್ಸಿನ ಮಕ್ಕಳ ಬುದ್ಧಿಜೀವನವನ್ನು ಅಳೆಯಲು ಯತ್ನಿಸಿದ. ಅನಂತರ ಇವನನ್ನು ಫ್ರಾನ್ಸಿನ ವಿದ್ಯಾಧಿಕಾರಿಯಾಗಿ ನೇಮಿಸಲಾಯಿತು. 

	ಬುದ್ಧಶಕ್ತಿಯ ಅಳತೆಗೊಂದು ಮೂಲಮಾನ: ಬೀನೆ ವಿದ್ಯಾಧಿಕಾರಿಯಾದ ಮೇಲೆ ತನ್ನ ದೇಶದ ಪ್ರಾಥಮಿಕ ಶಾಲೆಗಳಲ್ಲಿ ದುರ್ಬಲ ಬುದ್ಧಿಶಕ್ತಿಯ ಮಕ್ಕಳನ್ನು ಆರಿಸಲು ಒಂದು ರೀತಿಯ ಪ್ರಶ್ನಾವಳಿಯನ್ನು ಏರ್ಪಡಿಸಿದ. ಅವು ಮಕ್ಕಳ ಉನ್ನತ ಮನಶ್ಯಕ್ತಿಗಳನ್ನು ಅಳೆಯುವಂತೆ ರೂಪುಗೊಂಡಿದ್ದುವು. ಆದರಿಂದ ಯಾವ ಮಕ್ಕಳ ಬುದ್ಧಿಶಕ್ತಿ ಕಡಿಮೆ ಇದೆಯೋ ಅವರು ಪಾಠಶಾಲೆಯ ಶಿಕ್ಷಣಾಭಿವೃದ್ಧಿಯಲ್ಲೂ ಹಿಂದುಳಿದವರೆಂದು ಸ್ಥಿರಪಟ್ಟಿತು. ಅವನ ಈ ಪರೀಕ್ಷೆಗಳ ಪ್ರಥಮ ಉದ್ದೇಶ ಕೇವಲ ಹಿಂದುಳಿದ ಮಕ್ಕಳ ಮನಶ್ಯಕ್ತಿಯನ್ನು ಅಳೆಯುವುದೇ ಆಗಿದ್ದರೂ ಕ್ರಮಕ್ರಮವಾಗಿ ಸಾಧಾರಣ ಮಕ್ಕಳ ಮನಶ್ಯಕ್ತಿಯನ್ನು ಅಳೆಯಲು ಅದನ್ನು ಮಾರ್ಪಡಿಸಿಕೊಂಡು 5 ರಿಂದ 14 ವರ್ಷದ ಬಾಲಕರಿಗೆ ಅನುಕೂಲಿಸುವಂತೆ ಪ್ರಶ್ನಾವಳಿಗಳನ್ನು ತಯಾರಿಸಿದ. ಒಂದೊಂದು ತರಗತಿಗೆ ಗೊತ್ತಾದ ಪ್ರಶ್ನಾವಳಿಯಲ್ಲೂ 5 ಪ್ರಶ್ನೆಗಳಿದ್ದವು. ಸಾಧಾರಣ ಮಟ್ಟದ ಬಾಲಕರು ಆಯಾ ವರ್ಷದವರಿಗೆ ಸಿದ್ಧಪಡಿಸಿದ 5 ಪ್ರಶ್ನೆಗಳನ್ನು ಉತ್ತರಿಸಿದರೆ ಆ ಪ್ರಶ್ನಾವಳಿ ಆ ವಯಸ್ಸಿನ ಬಾಲಕರಿಗೆ ಸರಿಯಾಗಿದೆಯೆಂದು ಪ್ರಮಾಣಪಡಿಸಿಕೊಂಡ. 8 ವರ್ಷದ ಬಾಲಕನೊಬ್ಬ ಆ ವಯಸ್ಸಿಗೆ ಸಿದ್ಧಪಡಿಸಿದ 5 ಪ್ರಶ್ನೆಗಳನ್ನು ಉತ್ತರಿಸಿದರೇ ಆ ಬಾಲಕನ ಮನಶ್ಯಕ್ತಿ ಸರಾಸರಿ ಮಟ್ಟದ್ದೆಂದು ಪ್ರಮಾಣೀಕರಿಸಿ, ಅಂಥವನ ಬುದ್ಧಶಕ್ತಿ 8 ವರ್ಷವೆಂದು ಅಳೆಯುವ ಕ್ರಮ ಆರಂಭಿಸಿದ. ಸಾಧಾರಣ ಬುದ್ಧಿ ಶಕ್ತಿಯವರಂತೆ ದುರ್ಬಲ ಬುದ್ಧಿಶಕ್ತಿಯವರೂ ಉನ್ನತ ಬುದ್ಧಶಕ್ತಿಯವರೂ ತರಗತಿಯಲ್ಲಿ ಇರುತ್ತಾರೆ. ಅವರ ಬುದ್ಧಿಶಕ್ತಿಯನ್ನು ಅವರವರ ವಯಸ್ಸಿಗೆ ಸಿದ್ಧಪಡಿಸಿದ ಪ್ರಶ್ನಾವಳಿಯಿಂದ ಅಳೆಯಲು ದಾರಿ ಕಂಡುಕೊಂಡ. ಎಂಟು ವರ್ಷದ ಬಾಲಕನೊಬ್ಬ ಆ ವರ್ಷದವರೆಗೆ ಗೊತ್ತಾದ ಪ್ರಶ್ನಾವಳಿಯ 5 ಪ್ರಶ್ನೆಗಳನ್ನು ಉತ್ತರಿಸದಿದ್ದರೆ ಅಂಥವನ ಬುದ್ಧಿಶಕ್ತಿ 8 ವರ್ಷ ಕ್ಕಿಂತ ಕಡಿಮೆ ಎಂದು ತಿಳಿದು ಆಗ ಏಳು ವರ್ಷದವರಿಗೆ ಗೊತ್ತಾದ ಪ್ರಶ್ನಾವಳಿ ಕೊಡಬಹುದು; ಅದನ್ನು ಪೂರ್ಣವಾಗಿ ಉತ್ತರಿಸಿದರೆ ಅವನ ಬುದ್ಧಿಶಕ್ತಿ 7 ವರ್ಷದ್ದು. ವಾಸ್ತವವಾಗಿ ಅವನ ವಯಸ್ಸು ಎಂಟಾಗಿದ್ದರೂ ಅವನ ಬುದ್ಧಿಶಕ್ತಿಗೆ ಏಳು ವರ್ಷ ಮಾತ್ರ. ಎಂದರೆ ಅವನ ಬುದ್ಧಿಶಕ್ತಿ ಸಾಧಾರಣ ಮಟ್ಟಕ್ಕಿಂತ ಕಡಿಮೆ ಎಂದು ತಿಳಿಯಬೇಕು. ಅದೇ ವಯಸ್ಸಿನ ಇನ್ನೊಬ್ಬ ಎಂಟು ವರ್ಷದವರಿಗೆ ಗೊತ್ತಾದ ಪ್ರಶ್ನಾವಳಿಯನ್ನೆಲ್ಲ ಉತ್ತರಿಸಿ ಜೊತೆಗೆ 9 ವರ್ಷದವರಿಗೆ ಗೊತ್ತಾದ ಪ್ರಶ್ನಾವಳಿಯನ್ನೂ ಉತ್ತರಿಸ ಬಲ್ಲನಾದರೆ ಅವನ ಬುದ್ಧಿಶಕ್ತಿ ಸರಾಸರಿ ಮಟ್ಟಕ್ಕಿಂತ ಹೆಚ್ಚಿನದು; ಎಂದರೆ ಬುದ್ಧಿಶಕ್ತಿಯಲ್ಲಿ ಅವನು 9 ವರ್ಷದವನಾಗಿರುತ್ತಾನೆ. ಒಂದು ವೇಳೆ ಆತ 8 ವರ್ಷದವರಿಗೆ ಗೊತ್ತಾದ ಎಲ್ಲ ಪ್ರಶ್ನೆಗಳನ್ನೂ ಒಂಬತ್ತು ವರ್ಷದವರೆಗೆ ಗೊತ್ತಾದ ಎರಡು ಪ್ರಶ್ನೆಗಳನ್ನು ಉತ್ತರಿಸಿದರೆ ಅವನ ಬುದ್ಧಿಶಕ್ತಿಯ ವರ್ಷಗಳು ಎಂದು ತಿಳಿಯಬೇಕು. ಇದನ್ನು ಬುದ್ಧಿಶಕ್ತಿಯ ವಯಸ್ಸು (8+.4) 8.4 ಎಂದೂ ಕರೆಯಬಹುದು. 

	ಹೀಗೆ ಎಲ್ಲ ಮಟ್ಟದ ಬುದ್ಧಿಶಕ್ತಿಯನ್ನೂ ಅಳೆಯಲು ಅನುಕೂಲಿಸುವಂಥ ಸಾಧನವೊಂದನ್ನು ಬೀನೆ ಮೊದಲು ಪ್ರಚಾರಕ್ಕೆ ತಂದ. ಮನಶ್ಯಾಸ್ತ್ರಜ್ಞರು ಮಕ್ಕಳ ಮನಶ್ಯಕ್ತಿ ಅಳೆಯಲು ಇದನ್ನೇ ಉಪಯೋಗಿಸಲಾರಂಭಿಸಿದರು. ಅಮೆರಿಕದಲ್ಲೂ ಇಂಗ್ಲೆಂಡಿನಲ್ಲೂ ಈ ಸಾಧನ ಪ್ರಚಾರಕ್ಕೆ ಬಂತು. ಗೋಡಾರ್ಡ್ ಟರ್ಮನ್ ಮುಂತಾದವರು ಅಮೆರಿಕದಲ್ಲೂ ಸಿರಿಲ್ ಬರ್ಟ್ ಮೊದಲಾದವರು ಇಂಗ್ಲೆಂಡಿನಲ್ಲೂ ಬೀನೆಯ ಪ್ರಶ್ನಾವಳಿಗಳನ್ನು ತಮ್ಮ ತಮ್ಮ ನಾಡಿನ ಸನ್ನಿವೇಶಗಳಿಗೆ ಮಾರ್ಪಡಿಸಿಕೊಂಡು ಶಾಲೆಯ ಮಕ್ಕಳ ಬುದ್ಧಿ ಶಕ್ತಿಯನ್ನು ಆ ಮೂಲಕ ಅಳೆಯಲು ಅವಕಾಶ ಮಾಡಿಕೊಟ್ಟರು. ಕಾಲಕಳೆದಂತೆ ಅವು ಪರಿಷ್ಕರಣ ಗೊಳ್ಳುತ್ತ ಬಂದು ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚು ಸಮರ್ಪಕವಾಗಿ ಅಳೆಯಲು ಅನುಕೂಲಿಸುವಂಥ ಶಾಸ್ತ್ರೀಯ ರೀತಿಯ ಅಳತೆಯ ಸಾಧನ ರೂಪುಗೊಂಡವು.
(ಎಸ್.ಕೆ.ಆರ್.; ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ